world wide web(WWW) ಎಂದರೆ ಏನು? www.google.com ಮುಂದೆ www ಯಾಕೆ ಇರುತ್ತೆ ಗೊತ್ತಾ ??

0
244

ಆಧುನಿಕ ಯುಗ ಹಾಗೂ ಮಾನವನ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾದ ವರ್ಲ್ಡ್ ವೈಡ್ ವೆಬ್ (world wide web) ಶೋಧಿಸಿ ಇಂದಿಗೆ 30 ವರ್ಷಗಳಾಗಿವೆ.

ಹೆಸರೇ ಹೇಳುವಂತೆ ಇದು ವಿಶ್ವದ ಜ್ಞಾನ ಬಂಢಾರ. ಇದರ ಸಹಾಯದಿಂದ ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸಂಗ್ರಹಿಸಬಹುದು ಅಥವಾ ರವಾನಿಸಬಹುದು. ಕಳೆದ 30 ವರ್ಷದಲ್ಲಿ ಇದರ ವೇಗದ ಬೆಳವಣಿಗೆ ಎಂತವರಲ್ಲೂ ಅಚ್ಚರಿ ಹುಟ್ಟಿಸುತ್ತದೆ.

ಅಂತರ್ಜಾಲದಲ್ಲಿ ಇಂದು ಸಹಸ್ರಕೋಟಿ ವೆಬ್ ತಾಣಗಳಿವೆ. ಆ ಪೈಕಿ ನಮಗೆ ಬೇಕಾದ ತಾಣದ ಹುಡುಕಾಟ ನಡೆಸಲು world wide web ಅತೀ ಅವಶ್ಯಕ. ಈ ಸೇವೆ ಒಂದು ದಿನ ಸ್ತಬ್ಧವಾದರೂ ಸಹ ಜಗತ್ತಿನ ಮುಂದಿನ ಕ್ಷಣಗಳನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.

 

 

 

 

ಸ್ವಿಜರ್‌ಲೆಂಡ್‌ನ ಜಿನೇವಾದಲ್ಲಿರುವ ಭೌತಶಾಸ್ತ್ರ ಕೇಂದ್ರದಲ್ಲಿ ಕೆಲಸ ಮಾಡುತ್ತಲೇ ಇದರ ಅನ್ವೇಷಣೆಗೆ ಕಾರಣನಾದವನು ಟಿಮ್ ಬರ್ನರ್ಸ್‌ ಲೀ ಎಂಬ ಭೌತ ವಿಜ್ಞಾನಿ. ಆದರೆ ಇಂದು ಆತ ಅದೇ ವೇದಿಕೆಯಲ್ಲಿ ನಿಂತು world wide web ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾನೆ. ತಾನೇ ಸೃಷ್ಠಿಸಿದ ತಂತ್ರಜ್ಞಾನ ಇಂದು ಸಮಾಜಕ್ಕೆ ಕಂಟಕವಾಗುತ್ತಿದೆ ಎಂದು ಓರ್ವ ವಿಜ್ಞಾನಿ ಹೇಳುವ ಮಟ್ಟಿಗೆ ಇಂದು ಅದರ ಪ್ರಭಾವ ಬೆಳೆದಿದೆ ಎಂದರೆ ಅದರ ಬೆಳವಣಿಗೆಯನ್ನು ಊಹಿಸಬಹುದು.

world wide web ಎಂದರೆ ಏನು? ಅಂತರ್ಜಾಲಕ್ಕೂ ಇದಕ್ಕೂ ಇರುವ ವ್ಯತ್ಯಾಸವೇನು? ಹಾಗೂ ಈ ತಂತ್ರಜ್ಞಾನದ ಅನ್ವೇಷಣೆಯ ಹಿಂದಿನ ರೋಚಕ ಕಥೆ ಇಲ್ಲಿದೆ.

ಏನಿದು ವರ್ಲ್ಡ್ ವೈಡ್ ವೆಬ್ (WWW)?

ವರ್ಲ್ಡ್ ವೈಡ್ ವೆಬ್ ಎಂಬುದನ್ನು W W W ಮತ್ತು W3 ಎಂಬುದಾಗಿ ಸಂಕ್ಷೇಪಿಸುವುದು ವಾಡಿಕೆ. ಇದನ್ನು ಇಂದು ವಿಶ್ವದ ಒಂದು ಜ್ಞಾನದ ಬಂಢಾರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.

ಸಾಮಾನ್ಯವಾಗಿ ಎಲ್ಲರಿಗೂ ಅಂತರ್ಜಾಲ ಹಾಗೂ ವೆಬ್ ಎರಡು ಒಂದೇ ಎಂಬ ಭಾವನೆ ಇದೆ. ಆದರೆ W W W ಎಂಬುದು ಅಂತರ್ಜಾಲದ ಒಂದು ಭಾಗವೇ ವಿನಃ ಅದುವೇ ಅಂತರ್ಜಾಲವಲ್ಲ. ಅಂತರ್ಜಾಲದಲ್ಲಿ ಕೋಟಿ ಗಟ್ಟಲೆ ತಾಣಗಳಿವೆ. ಈ ವಿಶ್ವವ್ಯಾಪಿ ತಾಣಗಳ ಜೊತೆ ಹೈಪರ್‌ಲಿಂಕ್‌ಗಳ ಮೂಲಕ ಸಂಪರ್ಕ ಮಾಡಬಹುದು. ಈ ಹೈಪರ್‌ಲಿಂಕ್ ಮೂಲಕ ಅವುಗಳ ಜೊತೆಗೆ ಸಂಬಂಧ ಬೆಸೆಯಲು ಸಹಕಾರಿಯಾಗುವುದೇ ಈ W W W (world wide web).

ಸ್ವಿಜರ್‌ಲೆಂಡ್‌ನ ಜಿನೇವಾದಲ್ಲಿರುವ ಸಿಇಆರ್‌ಎನ್ (CERN) ಕಂಪೆನಿಯ ಭೌತ ವಿಜ್ಞಾನಿ ಟಿಮ್ ಬರ್ನರ್ಸ್‌ ಲಿ 1989 ಮಾರ್ಚ್ 12 ರಂದು ಮೊದಲ ಬಾರಿಗೆ W.W.W ಅಂದರೆ ವರ್ಲ್ಡ್ ವೈಡ್ ವೆಬ್ ಅನ್ನು ಸಂಶೋಧನೆ ಮಾಡಿದ್ದರು.

ವರ್ಲ್ಡ್ ವೈಡ್ ವೆಬ್ ಹುಟ್ಟಿದ ಕಥೆ

 

ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದದ್ದು. ಟಿಮ್ ಬರ್ನರ್ಸ್ ಲೀ 1980ರಲ್ಲಿ ಜಿನೇವಾದಲ್ಲಿರುವ ಯುರೀಪೊಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ ತಾತ್ಕಾಲಿಕ ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ ಹಾಗೂ ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಕುರಿತ ಮಾಹಿತಿಗಳನ್ನು ವ್ಯವಸ್ಥಿತವಾಗಿ ತನಗೆ ಸುಲಭವಾಗುವಂತೆ ಸಂಗ್ರಹಿಸಿಡುವ ಸಲುವಾಗಿ ಮೊಟ್ಟ ಮೊದಲ ಬಾರಿಗೆ ಹೈಪರ್‌ಟೆಕ್ಸ್ಟ್‌(hyper text) ಬಳಸಿದರು. ಅಲ್ಲದೆ ಈ ಕೆಲಸಕ್ಕಾಗಿಯೇ ಎನ್‌ಕ್ವೈರ್ (enquire) ಹೆಸರಿನ ಒಂದು ಗಣಕ ಕ್ರಮವಿಧಿ (computer programme) ರಚನೆ ಮಾಡಿದರು. ಆದರೆ ಆ ಕಾಲಕ್ಕೆ ಅದು ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ.

ಈ ನಡುವೆ ಅವರ ಕೆಲಸದ ಅವಧಿ ಮುಗಿದು ಅವರು ಕಂಪನಿಯಿಂದ ಹೊರನಡೆದರು. ಆದರೆ 1984ರಲ್ಲಿ ಮತ್ತೆ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಸರ್ನ್‌ಗೆ ಮರಳಿದ ಬೆರ್ನರ್ಸ್ ಲೀ ತಲೆಯಲ್ಲಿ enquire ಕುರಿತ ಆತನ ಸಂಶೋಧನೆ ಕೊರೆಯುತ್ತಿತ್ತು. ಇದೇ ಸಮಯದಲ್ಲಿ ಸರ್ವರ್ ಕುರಿತು ಸಂಶೋಧನೆಗಳು ಪ್ರಪಂಚದಾದ್ಯಂತ ವ್ಯಾಪಕವಾಗಿ ನಡೆಯುತ್ತಿತ್ತು.

ಈತ ಕೆಲಸ ಮಾಡುತ್ತಿದ್ದ ಸರ್ನ್ (cern) ಕಂಪೆನಿಗೆ ಎಲ್ಲಾ ಕಡೆಗಳಿಂದ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಇದರ ಬಗ್ಗೆ ತಲೆ ಕೆಡಿಸಿಕೊಂಡ ಲೀ ಎನ್‌ಕ್ವೈರ್ ತನಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುವಾಗುವಂತೆ ಪರಿವರ್ತಿಸಿದರು.

1989ರಲ್ಲಿ ಲೀ ಮಾಹಿತಿ ಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾ ಯೋಜನೆ ಒಪ್ಪಿಸಿದರು. ಈ ಯೋಜನೆಗೆ ಮಹತ್ವ ನೀಡದ ಕಂಪೆನಿ ಉತ್ತರ ನೀಡದೆ ಸುಮ್ಮನಾಗಿತ್ತು. ಆದರೆ ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದ ಲೀ ಪ್ರಪಂಚದ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಈ ವಿಧಾನವೇ ಇಂದು ನಾವು ಬಳಸುತ್ತಿರುವ ಯುನಿಫಾರ್ಮ್‌ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ.

 

www.BHARATHAEXPRESS.com, www.microsoft.com, www.google.com ಇತ್ಯಾದಿ ತಾಣಗಳನ್ನು ಉದಾಹರಿಸಬಹುದು. ಲೀ ಅವರು ಬಳಸಿದ ಪ್ರಥಮ ತಾಣಸೂಚಿ info.cern.ch ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟುಹಾಕಿದರು. ಅದುವೇ ಹೈಪರ್ಟೆಕ್ಸ್ಟ್‌ ಮಾರ್ಕಪ್ ಲಾಂಗ್ವೇಜ್ ( HTML).

ಬರ್ನರ್ಸ್ ಲೀ ತಮ್ಮ ಸಂಶೋಧನೆಯಲ್ಲಿ ಇಷ್ಟೆಲ್ಲ ಮುಂದುವರೆದಿದ್ದರು ಸರ್ನ್ ನೌಕರಶಾಹಿಗಳು ಮಾತ್ರ ಈ ಸಂಶೋಧನೆಯ ಕ್ರಿಯಾ ಯೋಜನೆಗೆ ಕೊನೆಯವರೆಗೆ ಹಣಕಾಸಿನ ನೆರವು ನೀಡಿರಲಿಲ್ಲ. ಆದರೆ ನಿರಾಶರಾಗದ ಲೀ ಜಗತ್ತಿನಾದ್ಯಂತ ಎಲ್ಲಾ ಸಂಶೋಧಕರಿಗೆ ವಿ-ಅಂಚೆ ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು.

ಇದರ ಮಹತ್ವ ಅರಿತ ಸಂಶೋಧಕರು ಹಾಗೂ ತಂತ್ರಜ್ಞರು ಅದನ್ನು ಬಳಸ ತೊಡಗಿದರು. ಇದರ ಫಲವಾಗಿಯೇ ಇಂದು ವಿಶ್ವದಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. 1994 ರಲ್ಲಿ ಅಮೇರಿಕದ ಎಮ್‌.ಐ.ಟಿ ಯಿಂದ ಅವರಿಗೆ ಕರೆ ಬಂದು, ಈ ಮೂಲಕ ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿತ್ತು.

ವಿಶ್ವದ ಮೊಟ್ಟಮೊದಲ ವೆಬ್ ಸರ್ವರ್ ನ ರೂಪದಲ್ಲಷ್ಟೇ ಅಲ್ಲದೇ, 1990 ರಲ್ಲಿ ಮೊಟ್ಟ ಮೊದಲ ವೆಬ್ ಬ್ರೌಸರ್ world wide web ಅನ್ನು ಬರೆಯಲೂ ಸಹ ಒಂದು NeXT ಕಂಪ್ಯೂಟರ್ ಅನ್ನು ಬಳಸಿದ. ಮೊಟ್ಟ ಮೊದಲ ವೆಬ್‌ ಬ್ರೌಸರ್, ಮೊಟ್ಟಮೊದಲ ವೆಬ್‌ ಸರ್ವರ್‌ ಮತ್ತು ಮೊಟ್ಟ ಮೊದಲ ವೆಬ್ ಪುಟಗಳಂಥ ಒಂದು ಕಾರ್ಯನಿರತ ವೆಬ್‌ಗೆ ಅಗತ್ಯವಿರುವ ಎಲ್ಲಾ ಸಾಧನಗಳನ್ನೂ 1990ರ ಕ್ರಿಸ್‌ಮಸ್‌ ಹೊತ್ತಿಗೆ ಬರ್ನರ್ಸ್ ಲೀ ರೂಪಿಸಿದ್ದರು.

ಲೀ ಅವರ ಮಹತ್ವಾಕಾಂಕ್ಷೆ ಯೋಜನೆಯ ಉದ್ದೇಶ ಏನು ಎಂಬುದನ್ನು ಅವರು ಆವಿಷ್ಕರಿಸಿದ ತಂತ್ರಜ್ಞಾನ ಹಾಗೂ ಉಪಕರಣಗಳೇ ವಿವರಿಸಿದವು. 1991ರ ಆಗಸ್ಟ್ 6 ರಂದು ವರ್ಲ್ಡ್ ವೈಡ್ ವೆಬ್‌ನ ಒಂದು ಕಿರು ಸಾರಾಂಶವನ್ನು alt.hypertext ನ್ಯೂಸ್ ಗ್ರೂಪ್‌ನಲ್ಲಿ ಪ್ರಕಟಿಸಿದರು. ಅಂತಾರ್ಜಾಲದಲ್ಲಿ ಒಂದು ಸಾರ್ವಜನಿಕವಾಗಿ ಲಭ್ಯವಿರುವ ಸೇವೆಯಾಗಿ ವೆಬ್‌ನ ಮೊದಲ ಪ್ರವೇಶವೂ ಸಹ ಇದೇ ದಿನ ಆಯಿತು. 1991 ಡೆಸೆಂಬರ್‌ನಲ್ಲಿ ಯುರೋಪ್ ಆಚೆಗೂ ಸಾರ್ವಜನಿಕ ಸೇವೆಯಾಗಿ ವೆಬ್‌ನ ಮೊದಲ ಪ್ರವೇಶವಾಯಿತು.

ಹೀಗೆ ದಿನ ಕಳೆದಂತೆ ವರ್ಲ್ಡ್ ವೈಡ್ ವೆಬ್‌ ಜನಪ್ರಿಯತೆ ಹೊಂದುತ್ತಾ ಜನರಿಗೆ ಅಮೂಲ್ಯ ಮಾಹಿತಿಗಳನ್ನು ನೀಡುತ್ತಾ ತಾನು ಬೆಳೆಯುತ್ತಾ ಸಾಗಿತು. ಇಂದಿನ ಯುಗದಲ್ಲಿ URL, HTML, HTTP ಕುರಿತು ಗೊತ್ತಿಲ್ಲದ ಜನರೇ ಇಲ್ಲವೇನೋ ಎನ್ನಬಹುದು. ಆ ಮಟ್ಟಿಗೆ ಇವು ಹೆಸರುವಾಸಿಯಾಗಿವೆ. ಇವು ಇಲ್ಲದ ಹೊರತಾಗಿ ಅಂತರ್ಜಾಲದಲ್ಲಿ ನಾವು ಯಾವ ಮಾಹಿತಿಯನ್ನು ಹುಡುಕುವುದು ಸಾಧ್ಯವಿಲ್ಲ.

2001 ರ ಅಧ್ಯಯನದ ಪ್ರಕಾರ ವೆಬ್ ಮಾಧ್ಯಮದಲ್ಲಿ 550 ಶತಕೋಟಿಗಿಂತಲೂ ಹೆಚ್ಚಿನ ದಸ್ತಾವೇಜುಗಳು ವೆಬ್ ಸ್ವರೂಪದಲ್ಲಿವೆ. 2009 ರ ಜನವರಿ ಅಂತ್ಯದ ವೇಳೆಗೆ ಸಾರ್ವಜನಿಕವಾಗಿ ಅನುಕ್ರಮಣಿಕೆ ಮಾಡಬಹುದಾದ ವೆಬ್‌ ತನ್ನಲ್ಲಿ 25.21 ಶತಕೋಟಿ ಪುಟಗಳನ್ನು ಹೊಂದಿದೆ ಎನ್ನುತ್ತಿವೆ ಅಂಕಿಅಂಶಗಳು. ಇಂತಹ ತಂತ್ರಾಂಶವನ್ನು ಶೋಧಿಸಿದ ಕಾರಣಕ್ಕೆ ಬೆರ್ನರ್ಸ್ ಲೀ ಗೆ ‘ವೆಬ್‌ ಜನಕ’ ಎಂದೇ ಕರೆಯಲಾಗುತ್ತದೆ.

ಟೈಮ್ ಮ್ಯಾಗಜೀನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ 100 ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೀನ್ ಅವರ ಹೆಸರು ಈ ಪಟ್ಟಿಯಲ್ಲಿರುವುದು ವಿಶೇಷ.

 

 

ಲೀ ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಬೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರದಲ್ಲಿ ಮಾಡಿದ್ದರೆ ಅವರಿಗೆ ‘ನೋಬಲ್ ಪ್ರಶಸ್ತಿ’ ಪ್ರಶಸ್ತಿ ದೊರೆತಿರುತ್ತಿತ್ತು. ಆದರೂ ಅವರ ಸಾಧನೆಯನ್ನು ಗೌರವಿಸಿ ಬಿಟ್ರೀಷ್ ಸರಕಾರ ‘ಸರ್’ ಬಿರುದನ್ನು ನೀಡಿದೆ.

ವರ್ಲ್ಡ್ ವೈಡ್ ವೆಬ್ ಆವಿಷ್ಕಾರವಾಗಿ ಇಂದಿಗೆ 30 ವರ್ಷವಾಗಿದೆ. ಪ್ರತಿಷ್ಠಿತ ಗೂಗಲ್ ಈ ನೆನಪಿಗಾಗಿ ಅವರಿಗೆ ಡೂಡಲ್ ಗೌರವ ನೀಡಿದೆ.

ಆದರೆ ಟಿಮ್ ಬೆರ್ನರ್ಸ್ ಲೀ 30 ವರ್ಷಗಳ ಹಿಂದೆ ಯಾವ ಜಿನೇವಾ ಭೌತ ವಿಜ್ಞಾನ ಕೇಂದ್ರದಲ್ಲಿ ನಿಂತು ಈ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದರೋ ಇಂದು ಅದೇ ವೇದಿಕೆಯ ಕಾರ್ಯಕ್ರಮದಲ್ಲಿ ತಾನೇ ಸೃಷ್ಟಿಸಿದ ವೆಬ್ ತಂತ್ರಜ್ಞಾನದ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವೆಬ್, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಇಂದು ಪ್ರಜಾಪ್ರಭುತ್ವ ಹಾಗೂ ಸಮಾಜಕ್ಕೆ ಮಾರಕವಾಗುತ್ತಿದೆ ಎನ್ನುತ್ತಿದ್ದಾರೆ ಎಂದರೆ, ಇವು ಇಂದಿನ ದಿನಗಳಲ್ಲಿ ನಮ್ಮ ನಿಯಂತ್ರಣವನ್ನೂ ಮೀರಿ ಬೆಳೆದಿರುವ ಪರಿಯನ್ನು ಊಹಿಸಬಹುದು. ಇದನ್ನು ಬಳಸುತ್ತಿರುವ ನೀವು ಕೂಡ ಹೆಚ್ಚು ವಿವೇಷನೆಯಿಂದ ಈ ಕುರಿತು ಆಲೋಚನೆ ಮಾಡಬೇಕಾದ ಸಮಯ ಇದು.

LEAVE A REPLY

Please enter your comment!
Please enter your name here